ಔರಾದ್: ಪಟ್ಟಣದ ಪ್ರಸಿದ್ಧ ಉದ್ಭವಲಿಂಗ ಅಮರೇಶ್ವರ ಜಾತ್ರೆಯ ಅಂಗವಾಗಿ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಪ್ರಾಂಗಣದಲ್ಲಿ ಆಯೋಜಿಸಲಾದ ಪಶುಪ್ರದರ್ಶನ ಗಮನ ಸೆಳೆಯಿತು. ಕರ್ನಾಟಕ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯಗಳಿಂದ ನೂರಾರು ರೈತರು ಭಾಗವಹಿಸಿ ತಮ್ಮ ಅತ್ಯುತ್ತಮ ತಳಿಯ ಹೋರಿ–ಹಸುಗಳನ್ನು ಪ್ರದರ್ಶಿಸಿದರು. ವಿವಿಧ ತಳಿಗಳ ಜಾನುವಾರುಗಳ ಸೌಂದರ್ಯ, ಆರೋಗ್ಯ ಹಾಗೂ ದೇಹದ ಕಟ್ಟಳೆ ಪಶುಪ್ರಿಯರ ಮನಸೂರೆಗೊಂಡಿತು.
ಪ್ರದರ್ಶನದಲ್ಲಿ ಪಾಲ್ಗೊಂಡ ಪಶುಗಳ ಜಾತಿ, ದೇಹದ ರೂಪು, ತೂಕ, ಆರೋಗ್ಯ ಸ್ಥಿತಿ, ಸಂರಕ್ಷಣೆ ಮತ್ತು ಆಹಾರ ಪದ್ಧತಿ ಕುರಿತು ಪಶುವೈದ್ಯರು ಸೂಕ್ಷ್ಮವಾಗಿ ಮೌಲ್ಯಮಾಪನ ನಡೆಸಿದರು.
ಮಹಾರಾಷ್ಟ್ರದ ದೇವರಜನ್ ಗ್ರಾಮದ ನಾರಾಯಣ ಅವರ ಎರಡೂವರೆ ವರ್ಷದ ದೇವಣಿ ತಳಿ ಹೋರಿ ಪ್ರಥಮ ಚಾಂಪಿಯನ್ ಬಹುಮಾನವಾಗಿ ₹10 ಸಾವಿರ ಗಳಿಸಿತು. ಈ ಹೋರಿಯ ಮಾರುಕಟ್ಟೆ ಮೌಲ್ಯ ಸುಮಾರು ₹5 ಲಕ್ಷ ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರದ ಜಲಕೋಟ್ನ ತಿರುಪತಿ ದೇವರಾಜ ಅವರ ನಾಲ್ಕು ಹಲ್ಲಿನ ಹೋರಿ ದ್ವಿತೀಯ ಬಹುಮಾನವಾಗಿ ₹7,500 ಪಡೆದುಕೊಂಡಿತು. ಔರಾದ್ನ ರೈತ ಖಂಡು ಕಿಶನರಾವ ಅವರ ದೇಶಿ ಆಕಳು ತೃತೀಯ ಬಹುಮಾನವಾಗಿ ₹5 ಸಾವಿರ ಗಳಿಸಿತು.
ಇದಲ್ಲದೆ ಪ್ರದರ್ಶನದಲ್ಲಿ ಪಾಲ್ಗೊಂಡ ಒಟ್ಟು 15 ತಳಿಯ ಜಾನುವಾರುಗಳಿಗೆ ಪ್ರಥಮ ಬಹುಮಾನ ₹1,000 ಹಾಗೂ ದ್ವಿತೀಯ ಬಹುಮಾನ ₹500 ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹೇಶ ಪಾಟೀಲ, ತಾ.ಪಂ. ಇಒ ಕಿರಣ ಪಾಟೀಲ, ಎಪಿಎಂಸಿ ಕಾರ್ಯದರ್ಶಿ ಸಂತೋಷ ಆನಂದ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ರಘುನಾಥ ಬಿರಾದಾರ, ಪಿಕೆಪಿಎಸ್ ಅಧ್ಯಕ್ಷ ಧೊಂಡಿಬಾ ನರೋಟೆ ಸೇರಿದಂತೆ ರವಿ ಮೀಸೆ, ಶಿವರಾಜ ಅಲ್ಮಾಜೆ, ಪ್ರಕಾಶ ಘುಳೆ, ಪ್ರಕಾಶ ಉಚ್ಚೆ, ತಾನಾಜಿ ಹಾಗೂ ನಿಖಿಲ್ ಡೊಂಬಾಳೆ ಹಾಜರಿದ್ದರು.
ಜಾತ್ರೆಯ ಅಂಗವಾಗಿ ನಡೆದ ಈ ಪಶುಪ್ರದರ್ಶನ ರೈತರಲ್ಲಿ ಉತ್ಸಾಹ ಮೂಡಿಸಿದ್ದು, ಉತ್ತಮ ತಳಿಗಳ ಸಂರಕ್ಷಣೆ ಹಾಗೂ ಪಶುಸಂಗೋಪನೆಗೆ ಪ್ರೋತ್ಸಾಹ ನೀಡುವ ವೇದಿಕೆಯಾಗಿತು.







