ಔರಾದ್, ಸೆ.30: ಔರಾದ್ (ಬಿ) ಪಟ್ಟಣದ ವಾರ್ಡ್ ನಂ. 6 ಮತ್ತು 7ರಲ್ಲಿ ಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸರಬರಾಜು ಹಾಗೂ ಬೀದಿ ದೀಪಗಳ ಸಮಸ್ಯೆ ಕಳೆದ ಹಲವು ತಿಂಗಳುಗಳಿಂದ ಮುಂದುವರಿದಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ಆರೋಪಿಸಿದೆ.
ವಾರ್ಡ್ಗಳಲ್ಲಿನ ಚರಂಡಿಗಳು ಸಂಪೂರ್ಣವಾಗಿ ತುಂಬಿ ಹೋಗಿ ಸುಮಾರು ಒಂದು ತಿಂಗಳಿಗೂ ಅಧಿಕ ಕಾಲ ಕಳೆದಿದ್ದರೂ ಸ್ವಚ್ಛತಾ ಕಾರ್ಯ ಕೈಗೊಳ್ಳದ ಕಾರಣ ಮಳೆ ನೀರು ಹಾಗೂ ಕೊಳಚೆ ನೀರು ರಸ್ತೆಗಳಲ್ಲಿ ನಿಂತು ದುರ್ವಾಸನೆ ಉಂಟಾಗುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದ್ದು, ಮಕ್ಕಳು, ವೃದ್ಧರು ಹಾಗೂ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನೂ, ವಾರ್ಡ್ ಪ್ರದೇಶದಲ್ಲಿ ಅಳವಡಿಸಿರುವ ಹೈಮಾಸ್ಟ್ ಬೀದಿ ದೀಪವು ಸುಮಾರು ಎರಡು ವರ್ಷಗಳಿಂದ ಕೆಟ್ಟು ಹೋಗಿದ್ದು, ರಾತ್ರಿ ವೇಳೆ ರಸ್ತೆಗಳಲ್ಲಿ ಕತ್ತಲೆ ಆವರಿಸುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಭದ್ರತಾ ಸಮಸ್ಯೆಯೂ ಎದುರಾಗುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅದರ ಜೊತೆಗೆ, ಕಳೆದ ಆರು ತಿಂಗಳಿಂದ ಒಂದು ವರ್ಷದವರೆಗೆ ವಾರ್ಡ್ನ ಓಣಿಗಳಿಗೆ ಸಮರ್ಪಕವಾಗಿ ಕುಡಿಯುವ ನೀರು ಹಾಗೂ ಬಳಕೆಯ ನೀರಿನ ಸರಬರಾಜು ಆಗುತ್ತಿಲ್ಲ. ನೀರಿನ ಸಮಸ್ಯೆಯಿಂದ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಂಘಟನೆ ತಿಳಿಸಿದೆ.
ಈ ಎಲ್ಲಾ ಸಮಸ್ಯೆಗಳ ಕುರಿತು ರಾಷ್ಟ್ರೀಯ ಅಹಿಂದ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿ, ಔರಾದ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ನಾಲ್ಕು ದಿನಗಳೊಳಗೆ ಚರಂಡಿ ಸ್ವಚ್ಛತೆ, ಬೀದಿ ದೀಪ ದುರಸ್ತಿ ಹಾಗೂ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನಿಗದಿತ ಅವಧಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ರಾಷ್ಟ್ರೀಯ ಅಹಿಂದ ಸಂಘಟನೆ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಸಾಂಕೇತಿಕ ಧರಣಿ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಈ ಕುರಿತು ಮನವಿಯ ಪ್ರತಿಯನ್ನು ತಹಶೀಲ್ದಾರ್ ಅವರ ಮುಖಾಂತರ ಬೀದರ ಜಿಲ್ಲಾ ಯೋಜನಾಧಿಕಾರಿಗಳಿಗೆ ಹಾಗೂ ಔರಾದ್ (ಬಿ) ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಈ ಸಂದರ್ಭದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆಯ ಯುವ ಘಟಕದ ರಾಜ್ಯಾಧ್ಯಕ್ಷ ಲಕ್ಷ್ಮಣ ಎಸ್. ದೇವಕತ್ತೆ, ತಾಲೂಕು ಅಧ್ಯಕ್ಷ ಸಚೀನ ಮೇತ್ರೆ, ಯುವ ಮುಖಂಡರಾದ ರಾಜಕುಮಾರ ಮುಧಾಳೆ, ಅಮರೇಶ್ವರ ಬ್ಯಾಡೆ, ಸಂತೋಷ ಚವ್ಹಾಣ, ಕೃಷ್ಣ ಕೋಳಿ, ರಮೇಶ ಚವ್ಹಾಣ, ಆಕಾಶ ಸೇರಿದಂತೆ ಹಲವಾರು ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.







