Home » ಕ್ರೀಡೆಗಳು » ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಇತಿಹಾಸ: ಮೂರನೇ ಬಾರಿ ಕಪ್ ಭಾರತಕ್ಕೆ

ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಇತಿಹಾಸ: ಮೂರನೇ ಬಾರಿ ಕಪ್ ಭಾರತಕ್ಕೆ

ಟಿ20 ವಿಶ್ವಕಪ್ ಫೈನಲ್‌ನಲ್ಲಿ ಟೀಮ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ತವರಿನಲ್ಲಿ ನಡೆದ ಈ ಟೂರ್ನಿಯಲ್ಲಿ ಭಾರತ ಕಪ್ ಗೆದ್ದು ಇತಿಹಾಸ ನಿರ್ಮಿಸಿದೆ. ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿದ್ದ ತಂಡವೇ ಚಾಂಪಿಯನ್ ಆಗಿರುವುದು ವಿಶೇಷ. ಒಟ್ಟಾರೆ ಮೂರನೇ ಬಾರಿ ಭಾರತ ಟಿ20 ವಿಶ್ವಕಪ್ ಗೆದ್ದು ಹೊಸ ದಾಖಲೆ ನಿರ್ಮಿಸಿದೆ.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಟೀಮ್ ಇಂಡಿಯಾದ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಭರ್ಜರಿ ಆರಂಭ ನೀಡಿದರು. ಪವರ್‌ಪ್ಲೇ ಅವಧಿಯಲ್ಲೇ ಇಬ್ಬರೂ ಅಬ್ಬರದ ಬ್ಯಾಟಿಂಗ್ ಮಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು. ಈ ಜೋಡಿ ಪವರ್‌ಪ್ಲೇನಲ್ಲಿ 92 ರನ್‌ಗಳ ಜೊತೆಯಾಟ ನೀಡಿ ಎದುರಾಳಿಗಳನ್ನು ಒತ್ತಡಕ್ಕೆ ತಳ್ಳಿತು.
ರನ್‌ ಬರ ಅನುಭವಿಸುತ್ತಿದ್ದ ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಅದ್ಭುತ ಫಾರ್ಮ್ ತೋರಿದರು. ಅವರು ಕೇವಲ 21 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಾಯದಿಂದ 52 ರನ್ ಸಿಡಿಸಿದರು. ಮೊದಲ ವಿಕೆಟ್‌ಗೆ ಸಂಜು ಮತ್ತು ಅಭಿಷೇಕ್ 7.1 ಓವರ್‌ಗಳಲ್ಲಿ 98 ರನ್‌ಗಳ ಜೊತೆಯಾಟ ನೀಡಿದರು.
ನಂತರ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಮತ್ತೊಂದು ಭರ್ಜರಿ ಜೊತೆಯಾಟ ಕಟ್ಟಿದರು. ಈ ಜೋಡಿ ಕೇವಲ 48 ಎಸೆತಗಳಲ್ಲಿ 105 ರನ್ ಸೇರಿಸಿ ತಂಡದ ಮೊತ್ತವನ್ನು ಭಾರೀ ಮಟ್ಟಕ್ಕೆ ಕೊಂಡೊಯ್ದಿತು. ಈ ವೇಳೆ ಸಂಜು ಸ್ಯಾಮ್ಸನ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 46 ಎಸೆತಗಳಲ್ಲಿ 5 ಬೌಂಡರಿ ಮತ್ತು 8 ಸಿಕ್ಸರ್ ಸಹಾಯದಿಂದ 89 ರನ್ ಸಿಡಿಸಿ ಔಟ್ ಆದರು.
ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಇಶಾನ್ ಕಿಶನ್ ಕೂಡ ಸ್ಫೋಟಕ ಆಟವಾಡಿ 25 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 54 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ 18 ರನ್ ಸೇರಿಸಿದರು. ಅಂತಿಮವಾಗಿ ಭಾರತ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು.
256 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕರಾದ ಫಿನ್ ಅಲೆನ್ ಹಾಗೂ ಟಿಮ್ ಸಿಫರ್ಟ್ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟ ನೀಡಿದರು. ಆದರೆ ಟೀಮ್ ಇಂಡಿಯಾ ಬೌಲರ್‌ಗಳು ಪವರ್‌ಪ್ಲೇ ಅವಧಿಯಲ್ಲೇ ಮೂರು ವಿಕೆಟ್‌ಗಳನ್ನು ಕಬಳಿಸಿ ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು.
ನ್ಯೂಜಿಲೆಂಡ್ ತಂಡದ ಪ್ರಮುಖ ಆಟಗಾರರಾದ ಗ್ಲೆನ್ ಫಿಲಿಪ್ಸ್ ಹಾಗೂ ರಚಿನ್ ರವೀಂದ್ರ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಮಧ್ಯಮ ಕ್ರಮಾಂಕದ ಡೇರಿಲ್ ಮಿಚೆಲ್ ಮತ್ತು ಮಾರ್ಕ್ ಚಾಪ್‌ಮನ್ ಕೂಡ ಒತ್ತಡವನ್ನು ತಡೆಯಲಾಗದೆ ಬೇಗನೆ ಔಟ್ ಆದರು.
ಟಿಮ್ ಸಿಫರ್ಟ್ ಮಾತ್ರ ಹೋರಾಟ ನಡೆಸಿ 52 ರನ್ ಸಿಡಿಸಿದರು. ನಾಯಕ ಮಿಚೆಲ್ ಸ್ಯಾಂಟ್ನರ್ 3 ಬೌಂಡರಿ ಮತ್ತು 2 ಸಿಕ್ಸರ್ ಸಹಾಯದಿಂದ 43 ರನ್ ಗಳಿಸಿದರು. ಆದರೆ ಇತರ ಬ್ಯಾಟರ್‌ಗಳ ವಿಫಲತೆಯಿಂದ ನ್ಯೂಜಿಲೆಂಡ್ ತಂಡ 19 ಓವರ್‌ಗಳಲ್ಲಿ 159 ರನ್‌ಗೆ ಆಲೌಟ್ ಆಯಿತು.
ಟೀಮ್ ಇಂಡಿಯಾದ ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮಿಂಚಿದರು. ಅವರು 4 ಓವರ್‌ಗಳಲ್ಲಿ ಕೇವಲ 15 ರನ್ ನೀಡಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಅಕ್ಷರ್ ಪಟೇಲ್ ಕೂಡ 3 ವಿಕೆಟ್ ಕಬಳಿಸಿ ನೆರವಾದರು.
ಪಂದ್ಯದ ಅತ್ಯುತ್ತಮ ಆಟಗಾರ (Man of the Match) ಪ್ರಶಸ್ತಿ ಜಸ್ಪ್ರೀತ್ ಬುಮ್ರಾ ಅವರಿಗೆ ಲಭಿಸಿದರೆ, ಟೂರ್ನಿಯ ಅತ್ಯುತ್ತಮ ಆಟಗಾರ (Man of the Series) ಪ್ರಶಸ್ತಿ ಸಂಜು ಸ್ಯಾಮ್ಸನ್ ಅವರಿಗೆ ಲಭಿಸಿತು.
ಟೀಮ್ ಇಂಡಿಯಾದ ಈ ಭರ್ಜರಿ ಜಯ ದೇಶದಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ಹರ್ಷೋದ್ಗಾರ ಮೂಡಿಸಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This