ಔರಾದ ಬಿ, 17 ಮಾರ್ಚ್ 2026 : ಬೀದರ ಜಿಲ್ಲೆಯ ಔರಾದ ತಾಲೂಕಿನ ಏಕಲಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಾಳ ಗ್ರಾಮದಲ್ಲಿ 2021-22ನೇ ಸಾಲಿನಲ್ಲಿ ರೂ. 24 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಅಂಗನವಾಡಿ ಕಟ್ಟಡ ಹಾಗೂ ಕಂಪೌಂಡ್ ಗೋಡೆ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿರುವುದು ಬಹಿರಂಗವಾಗಿದೆ.
ಈ ಕುರಿತು ಪ್ರಜಾವಾಣಿ, ವಿಜಯ ಕರ್ನಾಟಕ, ಪ್ರಜಾವಾಹಿನಿ, ಈಶಾನ್ಯ ಟೈಮ್ಸ್ ಸೇರಿದಂತೆ ಪ್ರಮುಖ ಪತ್ರಿಕೆಗಳಲ್ಲಿ 27-06-2025ರಂದು ಸುದ್ದಿ ಪ್ರಕಟವಾಗಿದ್ದು, ಉಪ್ಪೆ ನ್ಯೂಸ್ನಲ್ಲೂ ಅದೇ ದಿನ ವರದಿ ಹೊರಬಂದಿದೆ.
ಸ್ಥಳ ಪರಿಶೀಲನೆ ವೇಳೆ ಕಟ್ಟಡದ ಗುಣಮಟ್ಟ ಅತ್ಯಂತ ಹೀನವಾಗಿರುವುದು ಕಂಡುಬಂದಿದ್ದು, ಇದು ಅಂಗನವಾಡಿಗೆ ಬರುವ ಚಿಕ್ಕ ಮಕ್ಕಳ ಸುರಕ್ಷತೆಗೆ ಗಂಭೀರ ಅಪಾಯಕಾರಿಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನೊಂದೆಡೆ, ಕಟ್ಟಡದ ಹತ್ತಿರವೇ ಮೂರು ತೆರೆದ ಬಾವಿಗಳು ಇರುವುದರಿಂದ ಮಕ್ಕಳು ಆಟವಾಡುವ ವೇಳೆ ಅನಾಹುತ ಸಂಭವಿಸುವ ಭೀತಿ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.
ಈ ಗಂಭೀರ ವಿಷಯ ಕುರಿತು ಈಗಾಗಲೇ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೂ ಯಾವುದೇ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶೇಷವಾಗಿ, ಸ್ಥಳ ಪರಿಶೀಲನೆ ನಡೆಸದೇ ಕಟ್ಟಡವನ್ನು ಪಂಚಾಯತ್ ವಶಕ್ಕೆ ಪಡೆದುಕೊಂಡಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಗುತ್ತಿಗೆದಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ನಡುವೆ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಈ ಹಿನ್ನೆಲೆಯಲ್ಲಿ, ಗುತ್ತಿಗೆದಾರ, ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ, ಸಂಬಂಧಪಟ್ಟ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಕುರಿತು ಅಹಿಂದ ಸಂಘಟನೆಯ ಯುವ ಘಟಕ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ದೇವಕ್ಕತ್ತೆ ಅವರು ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಬೀದರ ಇವರಿಗೆ ಮನವಿ ಪತ್ರ ಸಲ್ಲಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.









