ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆ (Karnataka state police) ನೇರ ನೇಮಕಾತಿಯಲ್ಲಿ(Recruitment) ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ಘೋಷಿಸಿ ಮಹತ್ತ್ವದ ಆದೇಶ(Order) ಹೊರಡಿಸಿದೆ. ಇದರಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ(Candidates) ಇದೊಂದು ಸುವರ್ಣಾವಕಾಶವಾಗಿದೆ.
ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಅನ್ವಯವಾಗುವಂತೆ 5 ವರ್ಷಗಳ ಸಡಿಲಿಕೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ಡಾ. ಎಂ.ಎ. ಸಲೀಂ ಅವರು ಘೋಷಿಸಿ ಆದೇಶ ಹೊರಡಿಸಿದ್ದಾರೆ. ವಿಶೇಷ ಕ್ರಮವು 2026ರ ಮಾರ್ಚ್ 24 ರಿಂದ 2027ರ ಡಿಸೆಂಬರ್ 31ರ ವರೆಗಿನ ಅಧಿಸೂಚನೆಗಳಿಗೆ ಅನ್ವಯವಾಗಲಿದೆ. ಈ ವಯೋಮಿತಿ ಸಡಿಲಿಕೆ ಒಮ್ಮೆ ಮಾತ್ರ ಅನ್ವಯವಾಗುವ ವಿಶೇಷ ಕ್ರಮವಾಗಿದ್ದು, ಎಲ್ಲಾ ಪೊಲೀಸ್ ನೇಮಕಾತಿ ಅಧಿಸೂಚನೆಗಳಿಗೆ ಇದು ಅನ್ವಯವಾಗಲಿದೆ.
ಅಂದರೆ, ಈಗಿನ ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಗೆ ಹೆಚ್ಚುವರಿಯಾಗಿ 5 ವರ್ಷಗಳ ಅವಕಾಶ ದೊರೆಯಲಿದೆ. ಸಾಮಾನ್ಯ ವರ್ಗ, ಇತರೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗಾಗಿ, ವಯೋಮಿತಿ ಕಾರಣದಿಂದಾಗಿ ಹಿಂದೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದ ಅಭ್ಯರ್ಥಿಗಳಿಗೆ ಅವಕಾಶವಾಗಿದೆ.
ಕೋವಿಡ್-19 ಮಹಾಮಾರಿ ಹಾಗೂ ಇತರ ಆಡಳಿತಾತ್ಮಕ ಕಾರಣಗಳಿಂದ ಕಳೆದ ಕೆಲವು ವರ್ಷಗಳಲ್ಲಿ ನೇಮಕಾತಿ ಪ್ರಕ್ರಿಯೆಗಳು ವಿಳಂಬವಾಗಿದ್ದವು. ಇದರ ಪರಿಣಾಮವಾಗಿ ಅನೇಕ ಅಭ್ಯರ್ಥಿಗಳು ವಯೋಮಿತಿ ಮೀರಿದ್ದರು. ಇದನ್ನೆಲ್ಲ ಗಮನಿಸಿಕೊಂಡು ನ್ಯಾಯ ಒದಗಿಸುವ ಉದ್ದೇಶದಿಂದ ಈ ವಿಶೇಷ ವಯೋಮಿತಿ ಸಡಿಲಿಕೆ ಘೋಷಿಸಿದೆ. ವಯೋಮಿತಿ ಮೀರಿದ ಕಾರಣದಿಂದ ಕನಸು ತ್ಯಜಿಸಿದ್ದ ಅಭ್ಯರ್ಥಿಗಳು ಇದೀಗ ಮತ್ತೆ ತಮ್ಮ ಪ್ರಯತ್ನ ಮುಂದುವರಿಸಲು ಅವಕಾಶ ಪಡೆದಿದ್ದಾರೆ.







