Home » ರಾಜ್ಯ » ಕಾರ್ಮಿಕ ಮಕ್ಕಳಿಗೆ ಶಿಕ್ಷಣ ಕಿಟ್‌, ನವಜಾತ ತಪಾಸಣೆ ಯೋಜನೆಗೆ ಅನುಮೋದನೆ

ಕಾರ್ಮಿಕ ಮಕ್ಕಳಿಗೆ ಶಿಕ್ಷಣ ಕಿಟ್‌, ನವಜಾತ ತಪಾಸಣೆ ಯೋಜನೆಗೆ ಅನುಮೋದನೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳಿಗೆ ಅನುಮೋದನೆ ನೀಡಲಾಗಿದೆ.
ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ 1ರಿಂದ 12ನೇ ತರಗತಿಯಲ್ಲಿರುವ ಮಕ್ಕಳಿಗೆ ಶಿಕ್ಷಣ ಸಹಾಯವಾಗುವ ಉದ್ದೇಶದಿಂದ ವಿವಿಧ ಲೇಖನ ಸಾಮಗ್ರಿಗಳು ಹಾಗೂ ಪುಸ್ತಕಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಈ ಯೋಜನೆಗೆ ಒಟ್ಟು 115.84 ಕೋಟಿ ರೂ. ವೆಚ್ಚವಾಗಲಿದ್ದು, ಪ್ರತಿ ಕಿಟ್‌ಗೆ 8,625 ರೂ. ನಿಗದಿಪಡಿಸಲಾಗಿದೆ. ಕಿಟ್‌ನಲ್ಲಿ ಪುಸ್ತಕಗಳು, ನೋಟ್ ಪುಸ್ತಕಗಳು, ಪೆನ್‌, ಪೆನ್ಸಿಲ್‌ ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳು ಒಳಗೊಂಡಿರುತ್ತವೆ.
ಇದೇ ವೇಳೆ, ನವಜಾತ ಶಿಶುಗಳಲ್ಲಿ ಅಪರೂಪದ ಜನ್ಮಜಾತ ಚಯಾಪಚಯ ಅಸ್ವಸ್ಥತೆಗಳನ್ನು ಆರಂಭದಲ್ಲೇ ಪತ್ತೆಹಚ್ಚಲು “ಸಾರ್ವಜನಿಕ ನವಜಾತ ಶಿಶು ತಪಾಸಣೆ ಯೋಜನೆ”ಯನ್ನು ಜಾರಿಗೆ ತರಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಯೋಜನೆಗೆ 55.89 ಕೋಟಿ ರೂ. ಮೀಸಲಿಡಲಾಗಿದೆ.
ಆರೋಗ್ಯ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಉಚಿತ ಆರೋಗ್ಯ ಪತ್ತೆ ಸೇವೆ ಕಾರ್ಯಕ್ರಮದಡಿ 81 ಕೋಟಿ ರೂ. ಅಂದಾಜು ವೆಚ್ಚದಲ್ಲಿ 6 ಎಂಆರ್‌ಐ ಯಂತ್ರಗಳನ್ನು ರಾಜ್ಯದ 6 ಜಿಲ್ಲಾಸ್ಪತ್ರೆಗಳಿಗೆ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಇದಲ್ಲದೆ, ರಾಜ್ಯದ ಪ್ರಮುಖ ನಗರಗಳ ನಡುವಿನ ವಿಮಾನ ಸಂಪರ್ಕವನ್ನು ಉತ್ತೇಜಿಸಲು ಬೆಂಗಳೂರು–ಕಲಬುರಗಿ–ಬೆಂಗಳೂರು ಹಾಗೂ ಬೆಂಗಳೂರು–ಬೀದರ್–ಬೆಂಗಳೂರು ಮಾರ್ಗಗಳಲ್ಲಿ ವಿಮಾನ ಸೇವೆ ನಿರ್ವಹಣೆಗೆ ವಾರ್ಷಿಕ 28.47 ಕೋಟಿ ರೂ. ಪ್ರೋತ್ಸಾಹಧನ ನೀಡಲು ಸಚಿವ ಸಂಪುಟ ಸಮ್ಮತಿಸಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This