ಔರಾದ್, ಮಾರ್ಚ್ 5: ಪರಿಶಿಷ್ಟ ಜಾತಿಯ ಒಳಮೀಸಲಾತಿ ವಿಚಾರದಲ್ಲಿ ಬಲಗೈ (ಹೊಲೆಯ) ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಔರಾದ್ ಪಟ್ಟಣದಲ್ಲಿ ಒಂದು ದಿನದ ಸಾಂಕೇತಿಕ ಬಂದ್ ಹಾಗೂ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. ಸಮಾಜದ ಎಲ್ಲ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಆಗಸ್ಟ್ 1, 2024ರಂದು ನೀಡಿದ ತೀರ್ಪಿನ ಮೂಲಕ ಪರಿಶಿಷ್ಟ ಜಾತಿಗಳ ಮೀಸಲಾತಿಯನ್ನು ವರ್ಗೀಕರಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿತ್ತು. ಅದರ ಅನುಸಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಜಾರಿಗೊಳಿಸಲು ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಅವರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿತ್ತು. ರಾಜ್ಯದಲ್ಲಿರುವ 101 ಪರಿಶಿಷ್ಟ ಜಾತಿ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಅಧ್ಯಯನ ಮಾಡಲು ಈ ಆಯೋಗವನ್ನು ನೇಮಿಸಲಾಗಿತ್ತು.
ಆಯೋಗವು ರಾಜ್ಯದ ವಿವಿಧ ಭಾಗಗಳಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಂತರ ಸರ್ಕಾರವು ಆ ವರದಿಯನ್ನು ಕ್ಯಾಬಿನೆಟ್ನಲ್ಲಿ ಚರ್ಚಿಸಿ ಪರಿಶೀಲನೆ ನಡೆಸಿ ಕೆಲವು ತಿದ್ದುಪಡಿಗಳೊಂದಿಗೆ ಪರಿಶಿಷ್ಟ ಜಾತಿಗಳ ಒಳಮೀಸಲಾತಿಯನ್ನು ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ವರ್ಗೀಕರಿಸಿ ಗೆಜೆಟ್ ಅಧಿಸೂಚನೆ ಹೊರಡಿಸಿತು. ಆದರೆ ಈ ನಿರ್ಧಾರದಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಈ ನಿರ್ಧಾರವನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿ ಔರಾದ್ ಪಟ್ಟಣದಲ್ಲಿ ಒಂದು ದಿನದ ಸಾಂಕೇತಿಕ ಬಂದ್ ಹಾಗೂ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಲಾಗಿದೆ. ಪ್ರತಿಭಟನೆ ಮೂಲಕ ಸರ್ಕಾರದ ಗಮನಕ್ಕೆ ಹಲವು ಹಕ್ಕೊತ್ತಾಯಗಳನ್ನು ತರಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.
ಹಕ್ಕೊತ್ತಾಯಗಳು:ರೋಸ್ಟರ್ ಬಿಂದುವಿನಲ್ಲಿ ಇರುವ ನ್ಯೂನ್ಯತೆಗಳನ್ನು ಸರಿಪಡಿಸಿ ಸರ್ಕಾರ ಕಳುಹಿಸಿರುವ ಒಳಮೀಸಲಾತಿಯ ವರದಿಯನ್ನು ರಾಜ್ಯಪಾಲರು ಸರ್ಕಾರಕ್ಕೆ ಹಿಂದಕ್ಕೆ ಕಳುಹಿಸಬೇಕು.
ಪ್ರವರ್ಗ ಎ, ಬಿ ಮತ್ತು ಸಿ ವರ್ಗಗಳಿಗೆ ಸಮಾನ ಅವಕಾಶ ಕಲ್ಪಿಸುವಂತಹ ಕಾಯ್ದೆಯನ್ನು ರೂಪಿಸಿ ರೋಸ್ಟರ್ ವ್ಯವಸ್ಥೆಯನ್ನು ಪರಿಷ್ಕರಿಸಬೇಕು.
ಒಳಮೀಸಲಾತಿ ವರದಿಯ ಸಮಸ್ಯೆ ಬಗೆಹರಿಯುವ ತನಕ ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒಳಮೀಸಲಾತಿ ಜಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕು.
ಒಳಮೀಸಲಾತಿಯ ಗೊಂದಲಗಳು ಪರಿಹಾರವಾಗುವ ತನಕ ಹಳೆಯ ಮೀಸಲಾತಿ ಅನ್ವಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು.
ಹೊಸ ಜಾತಿ ಪ್ರಮಾಣಪತ್ರ ವಿತರಿಸುವುದನ್ನು ತುರ್ತಾಗಿ ನಿಲ್ಲಿಸಿ ಹಳೆಯ ಜಾತಿ ಪ್ರಮಾಣಪತ್ರವನ್ನೇ ಮುಂದುವರಿಸಬೇಕು.
ತಾಲೂಕು ಪದಾಧಿಕಾರಿಗಳು: ಗೌರವಾಧ್ಯಕ್ಷ – ಸುಭಾಷ ಲಾಧಾ, ಅಧ್ಯಕ್ಷ – ಪ್ರವೀಣ ಕಾರಂಜೆ ಕಾರ್ಯಾಧ್ಯಕ್ಷ – ಸಂಜುಕುಮಾರ ಲಾಧಾ,ಪ್ರಧಾನ ಕಾರ್ಯದರ್ಶಿಗಳು – ಸಂತೋಷ ಶಿಂದೆ, ಧನಾಜಿ ಕಾಂಬಳೆ,ಉಪಾಧ್ಯಕ್ಷರು: ದಿನೇಶ ಶಿಂದೆ, ತುಕಾರಾಮ ಹಸ್ಮತುಖಿ, ಅಖಿಲೇಶ ಸಾಗರ್, ಆನಂದ ಕಾಂಬಳೆ, ಪ್ರಕಾಶ ಕಾಂಬಳೆ,ಪ್ರಚಾರ ಸಮಿತಿ: ರತ್ನದೀಪ ಕಸ್ತೂರೆ, ಖಜಾಂಜಿಗಳು: ಸುನಿಲ್ ಮಿತ್ರಾ, ಪ್ರಕಾಶ ಭಂಗಾರೆ, ಸಂತೋಷ ಸೂರ್ಯವಂಶಿ, ಮಾರೂತಿ ಜಗದಾಳೆ
ಕಾರ್ಯದರ್ಶಿಗಳು: ಅನಿಲ್ ಭುಜಂಗೆ, ಉತ್ತಮ ಗಾಯಕವಾಡ, ಸಂಪತ್ ಫೈಟರ್, ಸುಂದರ ಮೆತ್ರೆ, ವಿನೋದ ಡೋಳೆ, ಅಂಬರೀಶ ಕ್ರಾಂತಿಕಾರಿ, ಸೂರ್ಯಕಾಂತ ರಕ್ಷಾಳೆ, ಕಾಂತೆಶ ಭಾಲ್ಕೆ, ರವಿ ನಾಗುರೆ, ಸೋನು ನಾಗುರೆ, ರಾಹುಲ್ ಬೋರೆ
ಗೌರವ ಸಲಹೆಗಾರರು: ಝರೆಪ್ಪಾ ವರ್ಮಾ, ಗಣಪತಿ ವಾಸುದೇವ, ಉತ್ತಮ ಮಾಂಜರೆಕರ, ರಾಜಕುಮಾರ ಮೈಲಾರೆ, ಗೌತಮ್ ಮೆತ್ರೆ, ಶಿವು ಕಾಂಬಳೆ, ರಾಹುಲ್ ಖಂದಾರೆ, ನರೇಂದ್ರ ಮೋರೆ, ಆನಂದ ಗಲಗಲೆ, ಸಿದ್ಧಾರ್ಥ ಭೋಸಲೆ, ಬಸವರಾಜ ಕಾಂಬಳೆ.







