Home » ರಾಜ್ಯ » ಒಳ ಮೀಸಲಾತಿ ಅಂತಿಮ: 56,432 ಹುದ್ದೆಗಳ ಭರ್ತಿಗೆ ಸರ್ಕಾರ ಸಜ್ಜು

ಒಳ ಮೀಸಲಾತಿ ಅಂತಿಮ: 56,432 ಹುದ್ದೆಗಳ ಭರ್ತಿಗೆ ಸರ್ಕಾರ ಸಜ್ಜು

ಬೆಂಗಳೂರು: ರಾಜ್ಯದಲ್ಲಿ ಬಹುಕಾಲದಿಂದ ಚರ್ಚೆಗೆ ಗ್ರಾಸವಾಗಿದ್ದ ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರಕ್ಕೆ ಇಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯ ಅಂತಿಮ ರೂಪುರೇಷೆ ನಿಗದಿಯಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಎಡಗೈ ಸಮುದಾಯಕ್ಕೆ 5.25%, ಬಲಗೈ ಸಮುದಾಯಕ್ಕೆ 5.25% ಹಾಗೂ ಇತರೆ ಸಮುದಾಯಗಳಿಗೆ 4.5% ಒಳ ಮೀಸಲಾತಿ ನೀಡಲು ಸರ್ವಾನುಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಘೋಷಿಸಿದರು.
56,432 ಹುದ್ದೆಗಳ ಭರ್ತಿ ಶೀಘ್ರ
ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ 56,432 ಸರ್ಕಾರಿ ಹುದ್ದೆಗಳ ಭರ್ತಿಗೆ ಒಳ ಮೀಸಲಾತಿಯ ಅಂತಿಮ ನಿರ್ಧಾರ ಅಡ್ಡಿಯಾಗಿತ್ತು. ಇದೀಗ ಆ ಅಡೆತಡೆ ನಿವಾರಣೆಯಾಗಿರುವುದರಿಂದ, ಹೊಸ ಮೀಸಲಾತಿ ಮಾದರಿಯ ಅನ್ವಯ ಮರು ಅಧಿಸೂಚನೆ ಪ್ರಕಟಿಸಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಕೋರ್ಟ್ ಆದೇಶದವರೆಗೆ ಜಾರಿ
ಮುಂದಿನ ನ್ಯಾಯಾಲಯದ ಆದೇಶ ಬರುವವರೆಗೂ ಇದೇ ಹೊಸ ಒಳ ಮೀಸಲಾತಿ ವಿಧಾನ ಅನುಸರಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಹೋರಾಟಗಳ ಫಲ
ಒಳ ಮೀಸಲಾತಿ ವಿಚಾರದಲ್ಲಿ ವರ್ಷಗಳಿಂದ ವಿವಿಧ ಸಮುದಾಯಗಳು ಹೋರಾಟ ನಡೆಸಿದ್ದವು. ಚಿತ್ರದುರ್ಗದಲ್ಲಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ 101 ಪರಿಶಿಷ್ಟ ಜಾತಿಗಳ ಪೈಕಿ 59 ಅಲೆಮಾರಿ ಜಾತಿಗಳು ಭಾಗವಹಿಸಿ ಒಳ ಮೀಸಲಾತಿಗೆ ಸರ್ವಾನುಮತ ಒಪ್ಪಿಗೆ ಸೂಚಿಸಿದ್ದವು.
ಸುಪ್ರೀಂ ಕೋರ್ಟ್ ತೀರ್ಪು ಆಧಾರ
2024 ಆಗಸ್ಟ್ 1ರಂದು ಸುಪ್ರೀಂ ಕೋರ್ಟ್‌ನ 7 ನ್ಯಾಯಮೂರ್ತಿಗಳ ಪೀಠ ಒಳ ಮೀಸಲಾತಿ ಸಂವಿಧಾನಬದ್ಧವೆಂದು ತೀರ್ಪು ನೀಡಿತ್ತು. ಈ ತೀರ್ಪಿನ ನಂತರ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ಪಡೆಯಲಾಗಿತ್ತು.
ತಾಂತ್ರಿಕ ಅಡಚಣೆಗಳ ಪರಿಹಾರ
ಹಿಂದಿನ ವರದಿಯಲ್ಲಿ ಎಡಗೈ, ಬಲಗೈ ಹಾಗೂ ಇತರರಿಗೆ ಕ್ರಮವಾಗಿ 6%, 6% ಮತ್ತು 5% ಮೀಸಲಾತಿ ಸೂಚಿಸಲಾಗಿತ್ತು. ಆದರೆ ರೋಸ್ಟರ್ ಪಾಯಿಂಟ್ ಸಮಸ್ಯೆ ಮತ್ತು 50% ಮಿತಿಯ ವಿಚಾರದಿಂದ ವಿವಾದ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ತಾಂತ್ರಿಕ ಸಮಿತಿ ರಚಿಸಿ ಅಂತಿಮವಾಗಿ 5.25%, 5.25% ಮತ್ತು 4.5% ಮೀಸಲಾತಿ ನಿಗದಿಪಡಿಸಲಾಗಿದೆ.
ಅಂತಿಮ ನಿರ್ಧಾರ
ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಸಚಿವ ಸಂಪುಟ ಸಭೆಯಲ್ಲಿ ಅಂತಿಮವಾಗಿ ಎಡಗೈ – 5.25%, ಬಲಗೈ – 5.25% ಮತ್ತು ಇತರರಿಗೆ – 4.5% ಒಳ ಮೀಸಲಾತಿ ನೀಡಲು ಒಪ್ಪಿಗೆ ನೀಡಲಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This