Home » ಬೀದರ ಜಿಲ್ಲೆ » ಔರಾದಿನಲ್ಲಿ ಬಾಲಕಾರ್ಮಿಕರ ವಿರುದ್ಧ ದಾಳಿ – 1 ಕಿಶೋರ ಕಾರ್ಮಿಕ ಪತ್ತೆ

ಔರಾದಿನಲ್ಲಿ ಬಾಲಕಾರ್ಮಿಕರ ವಿರುದ್ಧ ದಾಳಿ – 1 ಕಿಶೋರ ಕಾರ್ಮಿಕ ಪತ್ತೆ

ಬೀದರ, ಫೆಬ್ರವರಿ.27 (ಕರ್ನಾಟಕ ವಾರ್ತೆ):- ಔರಾದ್ ತಹಸೀಲ್ದಾರ ಮಹೇಶ್ ಪಾಟೀಲ್ ಅವರ ನೇತೃತ್ವದ ತಂಡವು ಫೆಬ್ರವರಿ 26ರಂದು ಔರಾದ ಪಟ್ಟಣದ ಅಂಗಡಿ, ಗ್ಯಾರೇಜ್, ಹೋಟೆಲ್, ಬೇಕರಿ ಹಾಗೂ ಬಸ್ ನಿಲ್ದಾಣದ ಒಳಗಿರುವ ವಿವಿಧ ಅಂಗಡಿಗಳಿಗೆ ದಾಳಿ ನಡೆಸಿ ತಪಾಸಣೆ ಮಾಡಿತು. ಈ ವೇಳೆ ಬಾಲಕಾರ್ಮಿಕರು ಮತ್ತು ಕಿಶೋರ ಕಾರ್ಮಿಕರನ್ನು ನೇಮಿಸಿಕೊಳ್ಳಬಾರದೆಂದು ಅಂಗಡಿ ಮಾಲೀಕರಿಗೆ ಅರಿವು ಮೂಡಿಸಿ ಕರಪತ್ರಗಳನ್ನು ಹಂಚಲಾಯಿತು.

ತಪಾಸಣೆ ವೇಳೆ ಒಬ್ಬ ಕಿಶೋರ ಕಾರ್ಮಿಕ ಪತ್ತೆಯಾಗಿದ್ದು, ಆತನ ಶಾಲಾ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ. ಸಂಬಂಧಿತ ಅಂಗಡಿ ಮಾಲೀಕರ ವಿರುದ್ಧ ಬಾಲ ಮತ್ತು ಕಿಶೋರ್ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಅನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಬ್ರವರಿ 26ರಂದು ಔರಾದ್ ತಹಸೀಲ್ದಾರ ಕಾರ್ಯಾಲಯದಲ್ಲಿ ಬಾಲ ಮತ್ತು ಕಿಶೋರ್ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರಡಿ ಪದ್ಧತಿ ನಿರ್ಮೂಲನೆ ಕುರಿತ ಮೊದಲ ತ್ರೈಮಾಸಿಕ ತಾಲೂಕು ಕಾರ್ಯಪಡೆ ಸಮಿತಿ ಸಭೆ, ಕಾರ್ಯಕಾರಿಣಿ ಸಮಿತಿ ಹಾಗೂ ಪುನರ್ವಸತಿ ಸಮಿತಿ ಸಭೆ ನಡೆದ ನಂತರ ಈ ದಾಳಿ ಕೈಗೊಳ್ಳಲಾಗಿದೆ.

ಸಭೆಯಲ್ಲಿ ರಾಹುಲ್ (ಕಾರ್ಮಿಕ ನಿರೀಕ್ಷಕರು, ಔರಾದ), ಅರ್ಜುನ್ (ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಕಾರ್ಮಿಕ ಇಲಾಖೆ ಬೀದರ), ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಔರಾದ), ಗುರುಸಿದ್ದಪ್ಪ (ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಲಾಖೆ, ಔರಾದ), ಶಫಿ (ಪುರಸಭೆ ಸಿಬ್ಬಂದಿ), ಉತ್ತಮಕುಮಾರ್ (ತಾಲೂಕು ಸಮಾಜ ಕಲ್ಯಾಣಾಧಿಕಾರಿ), ತಾಲೂಕು ಆರೋಗ್ಯಾಧಿಕಾರಿ, ಶಫಿಯೋದ್ದಿನ್ (ಪೊಲೀಸ್ ಠಾಣೆ ಸಿಬ್ಬಂದಿ), ವೃತ್ತ ನಿರೀಕ್ಷಕರು, ಮಕ್ಕಳ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಸುನಿಲ್, ಶ್ರೀಮತಿ ಸಂಗೀತಾ ಹಾಗೂ ರಾಘನಾಥ್ (ಕಾರ್ಮಿಕ ಇಲಾಖೆ ಸಿಬ್ಬಂದಿ) ಉಪಸ್ಥಿತರಿದ್ದರು.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This