ಬೆಂಗಳೂರು :ರಾಜ್ಯದ ಸರ್ಕಾರಿ ನೌಕರರಿಗೆ ಬಡ್ತಿ ಸೇರಿದಂತೆ ವಿವಿಧ ಸೇವಾ ಸೌಲಭ್ಯಗಳನ್ನು ಪಡೆಯಲು ಕಡ್ಡಾಯವಾಗಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಉತ್ತೀರ್ಣಗೊಳ್ಳುವ ಅಂತಿಮ ದಿನಾಂಕವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ವತಿಯಿಂದ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಗಡುವು 2026ರ ಅಂತ್ಯವರೆಗೆ ವಿಸ್ತರಣೆ
ಇದುವರೆಗೆ 31-12-2025ರವರೆಗೆ ನೀಡಲಾಗಿದ್ದ ಅವಕಾಶವನ್ನು ಈಗ 31-12-2026ರವರೆಗೆ ವಿಸ್ತರಿಸಲಾಗಿದೆ. ಅಂದರೆ, ಸರ್ಕಾರಿ ನೌಕರರು 2026ರ ಡಿಸೆಂಬರ್ 31ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಬೇಕು.
ಕಾನೂನುಬದ್ಧ ತಿದ್ದುಪಡಿ
ಈ ವಿಸ್ತರಣೆ ಕ್ರಮವು ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯ್ದೆ, 1978 ಅಡಿಯಲ್ಲಿ ಜಾರಿಗೊಂಡಿದೆ. ಕಾಯ್ದೆಯ ವಿಭಾಗ 3(1) ಜೊತೆಗೆ ಓದಲಾದ ವಿಭಾಗ 8 ರ ಮೂಲಕ ಸರ್ಕಾರಕ್ಕೆ ಲಭಿಸಿದ ಅಧಿಕಾರಗಳನ್ನು ಚಲಾಯಿಸಿ ಈ ಕರಡು ನಿಯಮಗಳನ್ನು ಪ್ರಕಟಿಸಲಾಗಿದೆ.
ಕರಡು ನಿಯಮಗಳ ಮುಖ್ಯ ಅಂಶಗಳು
ನಿಯಮಗಳ ಹೆಸರು ಮತ್ತು ಜಾರಿಗೆ ಬರವು
ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವೆಗಳು (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) (ತಿದ್ದುಪಡಿ) ನಿಯಮಗಳು, 2026 ಎಂದು ಕರೆಯಲಾಗುತ್ತದೆ. ಅಂತಿಮವಾಗಿ ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರಲಿದೆ.
2
2012ರ ನಿಯಮಗಳಲ್ಲಿ ತಿದ್ದುಪಡಿ
ಕರ್ನಾಟಕ ನಾಗರಿಕ ಸೇವೆಗಳ (ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ) ನಿಯಮಗಳು, 2012 ರ ನಿಯಮ 2 ಹಾಗೂ ನಿಯಮ 3ರಲ್ಲಿ “31.12.2025 ರ ಒಳಗೆ” ಎಂಬುದನ್ನು “31.12.2026 ರ ಒಳಗೆ” ಎಂದು ಪರಿಗಣಿಸುವಂತೆ ತಿದ್ದುಪಡಿ ಮಾಡಲಾಗಿದೆ.
ಈ ಬದಲಾವಣೆ 01-01-2026ರಿಂದ ಜಾರಿಗೆ ಬಂದಂತೆ ಪರಿಗಣಿಸಲಾಗುತ್ತದೆ.
ಆಕ್ಷೇಪಣೆ ಮತ್ತು ಸಲಹೆಗಳಿಗೆ ಅವಕಾಶ
ಈ ಕರಡು ನಿಯಮಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಸಾರ್ವಜನಿಕರಿಂದ ಆಕ್ಷೇಪಣೆಗಳು ಹಾಗೂ ಸಲಹೆಗಳು ಸ್ವೀಕರಿಸಲಾಗುತ್ತದೆ.
ಆಕ್ಷೇಪಣೆಗಳನ್ನು ಸರ್ಕಾರದ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನಸೌಧ, ಡಾ. ಬಿ.ಆರ್. ಅಂಬೇಡ್ಕರ್ ವೇದಿಕೆ, ಬೆಂಗಳೂರು – 560001 ವಿಳಾಸಕ್ಕೆ ಕಳುಹಿಸಬಹುದು.
ನೌಕರರಿಗೆ ಏನು ಲಾಭ?
ಬಡ್ತಿ ಮತ್ತು ಇತರೆ ಸೇವಾ ಸೌಲಭ್ಯಗಳಿಗೆ ಅಗತ್ಯವಿರುವ ಪರೀಕ್ಷೆಗೆ ಹೆಚ್ಚುವರಿ ಒಂದು ವರ್ಷದ ಅವಕಾಶ
ಪರೀಕ್ಷೆಗೆ ಸಿದ್ಧತೆ ಮಾಡಲು ಹೆಚ್ಚಿನ ಸಮಯ
ಸೇವಾ ನಿಯಮಗಳಿಗೆ ಅನುಗುಣವಾಗಿ ಅರ್ಹತೆ ಕಾಯ್ದುಕೊಳ್ಳಲು ನೆರವು
ರಾಜ್ಯದ ಸಾವಿರಾರು ಸರ್ಕಾರಿ ನೌಕರರಿಗೆ ಈ ವಿಸ್ತರಣೆ ಮಹತ್ವದ ನಿರ್ಧಾರವಾಗಿದ್ದು, 2026ರ ಅಂತ್ಯದೊಳಗೆ ಪರೀಕ್ಷೆ ಉತ್ತೀರ್ಣಗೊಳ್ಳುವಂತೆ ಇಲಾಖೆಗಳಿಂದ ಸೂಚನೆ ನೀಡಲಾಗಿದೆ.







