ಬೀದರ, ಮಾರ್ಚ.18 (ಕರ್ನಾಟಕ ವಾರ್ತೆ):- ಗೋಡಂಬಿ ಹಣ್ಣಿನ ಮೌಲ್ಯವರ್ಧನೆಯಿಂದ ವಿವಿಧ ಪಾನೀಯಗಳನ್ನು ತಯಾರಿಸಿ ಹೆಚ್ಚಿನ ಆದಾಯ ಪಡೆಯಬೇಕು.ಗೋಡಂಬಿಯು ಬರಡು ಮತ್ತು ಕೆಂಪು ಭೂಮಿಯ ಅದ್ಭುತ ಮತ್ತು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಬಂಗಾರದ ಬೆಳೆಯಾದ ಇದನ್ನು 7.50 x 7.50 ಮೀಟರಿನ ಅಂತರದಲ್ಲಿ ಸವಕಳಿಯಾದ ಕೆಂಪು ಮಣ್ಣಿನಲ್ಲಿ ಯಶಸ್ವಿಯಾಗಿ ಬೆಳೆದರೆ 3 ವರ್ಷದ ನಂತರ ರೈತರು ಇತರೇ ಬೆಳೆಗಳಿಗಿಂತ ಅಧಿಕ ಲಾಭ ಪಡೆಯಬಹುದೆಂದು ಬೀದರ ತೋಟಗಾರಿಕೆ ಕಾಲೇಜಿನ ಡೀನ್ ಡಾ.ಎಸ್.ವಿ.ಪಾಟೀಲ್ ರೈತರಿಗೆ ಸಲಹೆ ನೀಡಿದರು.
ಅವರು ಬುಧವಾರ ಬೀದರಿನಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ಗೋಡಂಬಿ ಮತ್ತು ಕೋಕೋ ಅಭಿವೃದ್ಧಿ ನಿರ್ದೇಶನಾಲಯ, ಕೊಚ್ಚಿ, ಕೇರಳದ ಅನುದಾನದಡಿ ರೈತರಿಗಾಗಿ ಆಯೋಜಿಸಿದ ಜಿಲ್ಲಾ ಮಟ್ಟದ “ಗೋಡಂಬಿ ಬೆಳೆ” ಕುರಿತು ಒಂದು ದಿನದ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದ ಹಾಗೂ ಕೋಳಾರ (ಕೆ) ಕೃಷಿ ಕ್ಷೇತ್ರದಲ್ಲಿ ಬೆಳೆದಿರುವ ವಿವಿಧ ತಳಿಗಳ ಕಚ್ಚಾ ಗೋಡಂಬಿಗಳ ಪ್ರದರ್ಶನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋಡಂಬಿ ಬೆಳೆಯನ್ನು ಕಡಿಮೆ ನೈಸರ್ಗಿಕ ಸಂಪನ್ಮೂಲ ಬಳಸಿ ಅಧಿಕ ಲಾಭ ಹಾಗೂ ಆರ್ಥಿಕ ಮತ್ತು ಪೋಷ್ಟಿಕಾಂಶದ ಭದ್ರತೆ ನೀಡುವ ಬೆಳೆಯಾಗಿದೆ. ಕೋಯ್ಲು ಮಾಡಿದ 5-8 ಕೆ.ಜಿ. ಗೋಡಂಬಿ ಹಣ್ಣಿಗೆ ಒಂದು ಕೆ.ಜಿ. ಕಚ್ಚಾ ಗೋಡಂಬಿ ದೊರೆಯುತ್ತದೆ. ಸುಮಾರು ಒಂದು ಎಕರೆಗೆ 5.6 ರಿಂದ 7 ಮೆಟ್ರಿಕ್ ಟನ್ದಷ್ಟು ಗೋಡಂಬಿ ಹಣ್ಣುಗಳು ದೊರೆಯುತ್ತವೆ. ಇದನ್ನು ಬೆಳೆದ ಹತ್ತು ವರ್ಷ ಮೇಲ್ಪಟ್ಟ ಗೋಡಂಬಿ ಬೆಳೆಯಿಂದ ಒಂದು ಎಕರೆ ಪ್ರದೇಶದಲ್ಲಿ ಅಂದಾಜು 1050-1100 ಕೆ.ಜಿ. ಕಚ್ಚಾ ಗೋಡಂಬಿಯ ಇಳುವರಿ ಪಡೆಯಬಹುದು ಎಂದರು
ಕರ್ನಾಟಕ ರಾಜ್ಯದಲ್ಲಿ ಶೇ.70 ರಷ್ಟು ಗೋಡಂಬಿಯನ್ನು ಕರಾವಳಿ ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಉಡುಪಿ ಜಿಲ್ಲೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಪ್ರದೇಶ ಮತ್ತು ಉತ್ಪಾದನೆಯಲ್ಲಿ ಕ್ರಮವಾಗಿ ಮೊದಲನೇ ಮತ್ತು ಎರಡನೇ ರ್ಯಾಂಕ್ ಪಡೆದಿವೆ. ಮಂಗಳೂರನ್ನು ಭಾರತ ದೇಶದ ಗೋಡಂಬಿ ರಾಜಧಾನಿ ಎಂದು ಹೆಸರುವಾಸಿಯಾಗಿದೆ ಎಂದು ಹೇಳಿದರು.
ಗೋಡಂಬಿ ಬೆಳೆಗಾರರಾದ ನಾಗನಾಥರಾವ ನಿಡೋದೆ ಹಾಗೂ ನಾರಾಯಣರಾವ ಬರಿದಾಬಾದೆ ಮಾತನಾಡಿ, ತಮಗೆ ಗೋಡಂಬಿ ಬೆಳೆಯಿಂದ ಸಾಕಷ್ಟು ಲಾಭವಾಗಿದೆ. ರೈತರು ಗೋಡಂಬಿ ಬೆಳೆ ಬೆಳೆಯುವುದರಿಂದ ಇನ್ನೊಂದು ಬೆಳೆಯ ಅತ್ಯುತ್ತಮ ಇಳುವರಿ ಮತ್ತು ಶುದ್ಧವಾದ ಪರಿಸರವನ್ನು ಪಡೆಯಬಹುದು. ಗೋಡಂಬಿ ಬೆಳೆಯನ್ನು ಬೆಳೆಯಲು ಬೀದರ ಜಿಲ್ಲೆಯ ವಾತಾವರಣ ಹೇಳಿಸಿ ಮಾಡಿದಂತಿದೆ. ಒಂದು ಬಾರಿ ನಾಟಿ ಮಾಡಿದರೆ ಸುಮಾರು 30 ವರ್ಷಗಳಿಗಿಂತ ಹೆಚ್ಚು ನಿರಂತರವಾಗಿ ಇದರ ಲಾಭ ಪಡೆಯಬಹುದು. ಬೀದರ ಹೆಚ್ಚು ಹೆಚ್ಚು ರೈತರು ಈ ಬೆಳೆಯನ್ನು ಬೆಳೆಯಲು ಮುಂದೆ ಬರಬೇಕು. ಇದಕ್ಕೆ ಕೆಂಪು ಮಣ್ಣು ಹೊಂದಿರುವ ಜಮೀನು ಸೂಕ್ತವೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಡಾ. ಮೊಹಮ್ಮದ ಫಾರೂಕ್, “ಬಯಲು ಪ್ರದೇಶಕ್ಕೆ ಸೂಕ್ತವಾದ ಗೋಡಂಬಿ ತಳಿಗಳು”, ಡಾ. ಶ್ರೀನಿವಾಸ ಎನ್. “ಗೋಡಂಬಿ ಬೆಳೆಯ ಸುಧಾರಿತ ಸಸಿ ತಯಾರಿಸುವ ವಿಧಾನಗಳು”, ಡಾ.ವಿಜಯ ಮಹಾಂತೇಶ “ಗೋಡಂಬಿ ಬೆಳೆಯಲ್ಲಿ ಸಾವಯವ ಬೇಸಾಯ ಕ್ರಮಗಳು” ಡಾ. ವಿ.ಪಿ.ಸಿಂಗ್ “ಗೋಡಂಬಿ ಬೆಳೆಯ ಔಷಧೀಯ ಮಹತ್ವ” ಕುರಿತು ವಿಸ್ತ್ರತವಾಗಿ ತಾಂತ್ರೀಕ ಮಾಹಿತಿ ರೈತರೊಂದಿಗೆ ಹಂಚಿಕೊAಡರು.
ವೀರಭದ್ರೇಶ್ವರ ಅಗ್ರೋ ಇಂಡಸ್ಟ್ರೀಜ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮೋಲಕುಮಾರ ವಿಜಾಪೂರೆ ಮಾತನಾಡಿ, ಕಚ್ಚಾ ಗೋಡಂಬಿಯನ್ನು ಬೀದರ ಜಿಲ್ಲೆಯ ಹೆಚ್ಚು ಹೆಚ್ಚು ರೈತರೇ ಬೆಳೆದು ಪ್ರೋಸೆಸಿಂಗಗೆ ಪೂರೈಸಿದರೆ ತಾವು ಖರೀದಿಸಿ ಒಳ್ಳೆಯ ದರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಈ ವಿಚಾರ ಸಂಕಿರಣದಲ್ಲಿ ಗೋಡಂಬಿ ಬೆಳೆ ಹಾಗೂ ಮೌಲ್ಯವರ್ಧಿತ ಪದಾರ್ಥಗಳ ವಸ್ತು ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬೀದರ ಜಿಲ್ಲೆಯ 150 ರೈತರು ಪಾಲ್ಗೊಂಡು ವಿಚಾರ ಸಂಕಿರಣದ ಸದುಪಯೋಗ ಪಡೆದುಕೊಂಡರು. ಗೋಡಂಬಿ ಬೆಳೆ ಕುರಿತು ರೈತರು ಕೇಳಲಾದ ಪ್ರಶ್ನೆಗಳಿಗೆ ತಜ್ಞರು ಮಾಹಿತಿ ಸಹ ನೀಡಿದರು. ಡಾ. ವಿ.ಪಿ. ಸಿಂಗ್ ಸ್ವಾಗತಿಸಿದರು, ಡಾ. ವಿಜಯ ಮಹಾಂತೇಶ ರವರು ನಿರೂಪಿಸಿದರು.







