Home » ಬೀದರ ಜಿಲ್ಲೆ » ರೋಸ್ಟರ್ ಅಸಮತೋಲನಕ್ಕೆ ಆಕ್ರೋಶ: ಔರಾದ್ ಪಟ್ಟಣದಲ್ಲಿ ಭಾರೀ ಪ್ರತಿಭಟನೆ

ರೋಸ್ಟರ್ ಅಸಮತೋಲನಕ್ಕೆ ಆಕ್ರೋಶ: ಔರಾದ್ ಪಟ್ಟಣದಲ್ಲಿ ಭಾರೀ ಪ್ರತಿಭಟನೆ

ಔರಾದ್ (ಬೀದರ), ಮಾರ್ಚ್ 6:ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ರೋಸ್ಟರ್ ಬಿಂದುವಿನಲ್ಲಿ ಉಂಟಾಗಿರುವ ಅಸಮತೋಲನವನ್ನು ಖಂಡಿಸಿ ಪರಿಶಿಷ್ಟ ಜಾತಿ ಬಲಗೈ ಸಮುದಾಯ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಔರಾದ್ (ಬಾ) ಪಟ್ಟಣದಲ್ಲಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಭಾರೀ ಪ್ರತಿಭಟನೆ, ರ್ಯಾಲಿ ಹಾಗೂ ಸಭೆಗಳು ನಡೆಯಿತು. 

ಎಪಿಎಂಸಿ ಕ್ರಾಸ್‌ನಿಂದ ಬಸ್ ನಿಲ್ದಾಣದವರೆಗೆ ನೂರಾರು ಕಾರ್ಯಕರ್ತರು, ಯುವಕರು ಹಾಗೂ ಸಾರ್ವಜನಿಕರು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು. ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಬಹುತೇಕ ಅಂಗಡಿಗಳು, ವ್ಯಾಪಾರ ಮಳಿಗೆಗಳು ಹಾಗೂ ಕೆಲವು ವಾಣಿಜ್ಯ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಬಾಗಿಲು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದವು. ಇದರ ಪರಿಣಾಮವಾಗಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಭಾಗಶಃ ಸ್ಥಗಿತಗೊಂಡಿತ್ತು.

ಪ್ರಮುಖ ರಸ್ತೆಗಳಲ್ಲಿ ಕೆಲ

ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸಾರ್ವಜನಿಕರು ಸಂಚಾರದಲ್ಲಿ ಸ್ವಲ್ಪ ಅಸೌಕರ್ಯ ಅನುಭವಿಸಿದರು. ಪರಿಸ್ಥಿತಿ ನಿಯಂತ್ರಣದಲ್ಲಿರಲು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದರು. ಪಟ್ಟಣದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳ ಬಳಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ನಿಗಾವಹಿಸಲಾಗಿತ್ತು.

ಪ್ರತಿಭಟನೆಯ ವೇಳೆ ಮಾತನಾಡಿದ ಹೋರಾಟ ಸಮಿತಿಯ ಮುಖಂಡರಾದ ಶ್ರೀ ಸುಭಾಷ ಲಾಧಾ ಹಾಗೂ ಶ್ರೀ ಪ್ರವೀಣ ಕಾರಂಜೆ ಅವರು, ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ನೀಡಿದ ಶಿಫಾರಸ್ಸುಗಳನ್ನು ಸರಿಯಾಗಿ ಜಾರಿಗೊಳಿಸಿದ್ದರೆ ಇಂತಹ ಸಮಸ್ಯೆಗಳು ಎದುರಾಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ರಾಜಕೀಯ ಒತ್ತಡಗಳು ಮತ್ತು ತೀರ್ಮಾನಗಳಿಂದ ರೋಸ್ಟರ್ ವ್ಯವಸ್ಥೆಯ ಸಮತೋಲನ ಹದಗೆಟ್ಟಿದ್ದು, ಕೆಲವು ಸಮುದಾಯಗಳಿಗೆ ಅನ್ಯಾಯವಾಗುತ್ತಿದೆ ಎಂದು ಅವರು ಆರೋಪಿಸಿದರು. ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಸಮ್ಮತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಧನಾಜಿ ಕಾಂಬಳೆ, ಸಂತೋಷ ಕೆ. ಶಿಂದೆ, ದಿನೇಶ ಶಿಂದೆ, ಪ್ರಕಾಶ ಕಾಂಬಳೆ, ತುಕಾರಾಮ ಹಸ್ನಮುಖಿ, ಅಖಿಲೇಶ ಸಾಗರ, ಆನಂದ ಕಾಂಬಳೆ, ಪ್ರಕಾಶ ಭಂಗಾರೆ, ಸಂತೋಷ ಸೂರ್ಯವಂಶಿ, ಮಾರುತಿ ಜಾಗದಳೇ ಸೇರಿದಂತೆ ಹಲವಾರು ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ನೀತಿಯನ್ನು ತೀವ್ರವಾಗಿ ಖಂಡಿಸಿದರು.

ಸಭೆಯಲ್ಲಿ ಮಾತನಾಡಿದ ರತ್ನದೀಪ ಕಸ್ತೂರೆ ಅವರು, ಡಾ. ಬಿ.ಆರ್. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಪರವಾಗಿ ಮಾಡಿದ ಮಹತ್ವದ ಹೋರಾಟವನ್ನು ಸ್ಮರಿಸಿದರು. ಅವರ ಆಶಯಗಳಿಗೆ ವಿರುದ್ಧವಾಗಿ ಯಾವುದೇ ಸಮುದಾಯದ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂದು ಹೇಳಿದರು. ಸರ್ಕಾರವು ಸಮಾನ ಅವಕಾಶದ ತತ್ವವನ್ನು ಕಾಪಾಡುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವಂತೆ ನೀತಿಗಳನ್ನು ರೂಪಿಸಬೇಕು ಎಂದು ಅವರು ಆಗ್ರಹಿಸಿದರು.

ಇದೇ ವೇಳೆ ಹುಮನಾಬಾದ್ ಜನಧ್ವನಿ ಸಂಘಟನೆಯ ಅಧ್ಯಕ್ಷ ಅಂಕುಶ್ ಗೋಖಲೆ ಮಾತನಾಡಿ, ಬಲಗೈ ಮತ್ತು ಎಡಗೈ ಸಮುದಾಯಗಳ ನಡುವೆ ಭಿನ್ನತೆ ಉಂಟುಮಾಡಲು ಕೆಲವರು ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಎರಡೂ ಸಮುದಾಯಗಳ ಜನರು ಶತಮಾನಗಳಿಂದ ಅಣ್ಣ-ತಮ್ಮಂದಿರಂತೆ ಒಗ್ಗಟ್ಟಿನಿಂದ ಬದುಕುತ್ತಿದ್ದು, ಈ ವಿಷಯದಲ್ಲಿ ಶಾಂತಿಯುತ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು. ಹೊರಗಿನವರ ಕುತಂತ್ರಕ್ಕೆ ಒಳಗಾಗದೆ ಸಮಾಜದ ಏಕತೆ ಕಾಪಾಡಿಕೊಳ್ಳಬೇಕೆಂದು ಅವರು ಕರೆ ನೀಡಿದರು.

ಪ್ರತಿಭಟನೆ ನಂತರ ಹೋರಾಟ ಸಮಿತಿಯ ಮುಖಂಡರು ಸರ್ಕಾರಕ್ಕೆ ಮನವಿ ಸಲ್ಲಿಸಿ, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಉಂಟಾಗಿರುವ ಅಸಮತೋಲನವನ್ನು ತಕ್ಷಣ ಸರಿಪಡಿಸಿ ನ್ಯಾಯಯುತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಬಂದ್ ಹಾಗೂ ಪ್ರತಿಭಟನೆ ಶಾಂತಿಯುತವಾಗಿ ನಡೆಯಿತು ಎಂದು ಆಯೋಜಕರು ತಿಳಿಸಿದ್ದಾರೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This