Home » ಬೀದರ ಜಿಲ್ಲೆ » ಶಿಕ್ಷಣಕ್ಕೆ ಬೆಂಬಲ ನೀಡಿದ ರೋಟರಿ ಕ್ಲಬ್ – 500 ವಿದ್ಯಾರ್ಥಿಗಳಿಗೆ ನೆರವು

ಶಿಕ್ಷಣಕ್ಕೆ ಬೆಂಬಲ ನೀಡಿದ ರೋಟರಿ ಕ್ಲಬ್ – 500 ವಿದ್ಯಾರ್ಥಿಗಳಿಗೆ ನೆರವು

ಬೀದರ್, ಮಾರ್ಚ್ 1: ರಾಜ್ಯಾದ್ಯಂತ ಮಾರ್ಚ್ 18ರಿಂದ ಆರಂಭವಾಗಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಹಾಗೂ ನೆರವು ನೀಡುವ ಉದ್ದೇಶದಿಂದ ರೋಟರಿ ಕ್ಲಬ್ ಆಫ್ ಬೀದರ್ ಸಿಲ್ವರ್ ಸ್ಟಾರ್ ವತಿಯಿಂದ ‘ರೈಟ್ ಯುವರ್ ಫ್ಯೂಚರ್’ ಯೋಜನೆಯಡಿ 500 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಕಿಟ್‌ಗಳನ್ನು ವಿತರಿಸುವ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

ಬೀದರ್ ತಾಲೂಕಿನ ಕಮಠಾಣ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎಸ್‌ಎಸ್‌ಎಲ್‌ಸಿಯ 110 ವಿದ್ಯಾರ್ಥಿಗಳು ಹಾಗೂ 9ನೇ ತರಗತಿಯ 95 ವಿದ್ಯಾರ್ಥಿಗಳಿಗೆ ಪರೀಕ್ಷಾ ಪ್ಯಾಡ್, ಜಾಮಿಟ್ರಿ ಬಾಕ್ಸ್, ಪೆನ್ ಸೇರಿದಂತೆ ಅಗತ್ಯ ಶಿಕ್ಷಣ ಪರಿಕರಗಳನ್ನು ಒಳಗೊಂಡ ಪರೀಕ್ಷಾ ಕಿಟ್‌ಗಳನ್ನು ವಿತರಿಸಲಾಯಿತು. ವಿದ್ಯಾರ್ಥಿಗಳು ಈ ನೆರವಿನಿಂದ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಿದ್ಧರಾಗಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕ್ಲಬ್ ಅಧ್ಯಕ್ಷ ಆದೀಶ್ ಆರ್. ವಾಲಿಯವರು, “ಜಿಲ್ಲೆಯ 500 ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯದಲ್ಲಿ ಅಗತ್ಯ ಸೌಲಭ್ಯ ಒದಗಿಸುವ ಸದುದ್ದೇಶದಿಂದ ಈ ಯೋಜನೆಯನ್ನು ಕೈಗೊಂಡಿದ್ದೇವೆ. ಕಮಠಾಣ ಗ್ರಾಮದಿಂದ ಆರಂಭವಾದ ಈ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಗೊರನಳ್ಳಿ, ಅಮಲಾಪುರ ಹಾಗೂ ನೌಬಾದ್ ಶಾಲೆಗಳಿಗೂ ವಿಸ್ತರಿಸಲಾಗುವುದು,” ಎಂದು ತಿಳಿಸಿದರು.

ಕ್ಲಬ್ ಕಾರ್ಯದರ್ಶಿ ಕಿರಣ್ ಸ್ಯಾಮ್ಯುಯೆಲ್ ಅವರು ಮಾತನಾಡಿ, “ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಸರೆಯಾಗುವುದು ನಮ್ಮ ಕ್ಲಬ್‌ನ ಪ್ರಮುಖ ಗುರಿ. ‘ಎಜುಕೇಟ್ ಚೈಲ್ಡ್ – ಎಂಪವರ್ ಫ್ಯೂಚರ್’ ಯೋಜನೆಯಡಿ ಸಂಗ್ರಹವಾದ ನಿಧಿಯಿಂದ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಗಳಿಸುವ ಬಡ ವಿದ್ಯಾರ್ಥಿಗಳಿಗೆ ಉಚಿತ ಪಿಯುಸಿ ಶಿಕ್ಷಣ ನೀಡಲಾಗುವುದು,” ಎಂದು ಘೋಷಿಸಿದರು.

ಶಾಲೆಯ ಮುಖ್ಯೋಪಾಧ್ಯಾಯ ರವಿಕುಮಾರ್ ಕುಮನೂರ ಅವರು, “ರೋಟರಿ ಸಂಸ್ಥೆಯ ಈ ಸೇವೆ ಶ್ಲಾಘನೀಯ. ಪರೀಕ್ಷಾ ಕಿಟ್ ವಿತರಣೆ ಮಾತ್ರವಲ್ಲದೆ, ವಿದ್ಯಾರ್ಥಿವೇತನದ ಭರವಸೆ ನೀಡಿರುವುದು ಮಕ್ಕಳಲ್ಲಿ ಹೆಚ್ಚಿನ ಉತ್ಸಾಹ ಮೂಡಿಸಿದೆ,” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕ್ಲಬ್ ಉಪಾಧ್ಯಕ್ಷ ಆನಂದ ಕೋಟಾರ್ಕಿ, ಖಜಾಂಜಿ ಅಂಬರೀಶ್ ಅಂಬಿಸಂಗೆ, ನಿರ್ದೇಶಕರು ಸ್ಪೂರ್ತಿ ಧನ್ನೂರ, ಕೀರ್ತಿ ವಾಲೆ, ಮಂಜುನಾಥ ಖೂಬಾ, ಪದಾಧಿಕಾರಿಗಳು ಬಸವ ಪ್ರಸಾದ್, ನಿಖಿಲ್ ಗಂಗಶೆಟ್ಟಿ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಈ ಯೋಜನೆಯ ಮೂಲಕ ಬಡ ಹಾಗೂ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಕುರಿತು ನಂಬಿಕೆ ಹಾಗೂ ಉತ್ಸಾಹ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.

ಈ ಸುದ್ದಿಗೆ ನಿಮ್ಮ ಪ್ರತಿಕ್ರಿಯೆಯನ್ನು ವಿಶ್ರಾಂತಿ ಮಾಡಿ

Leave a Comment

Share This