ಬೀದರ್ ನಗರದ ಶಿವನಗರ ಪ್ರದೇಶದಲ್ಲಿರುವ ಸಾರ್ವಜನಿಕರು ವಾಕಿಂಗ್ ಮಾಡಲು ಬಳಸುವ ಸ್ಥಳದಲ್ಲಿ ಕೈಗೊಂಡಿರುವ ಕಾಮಗಾರಿಯು ಪೂರ್ಣಗೊಳ್ಳದೆ ಮಧ್ಯದಲ್ಲಿಯೇ ನಿಂತಿರುವುದರಿಂದ ಸ್ಥಳೀಯ ನಿವಾಸಿಗಳು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮಹಾನಗರ ಪಾಲಿಕೆಯವರು ಚರಂಡಿ ದುರಸ್ತಿ ಕಾಮಗಾರಿಯನ್ನು ಆರಂಭಿಸಿದ್ದರೂ, ಅದನ್ನು ಸಂಪೂರ್ಣವಾಗಿ ಪೂರ್ಣಗೊಳಿಸದೆ ಹಾಗೆಯೇ ಬಿಟ್ಟುಹೋಗಿರುವುದರಿಂದ ಸಾರ್ವಜನಿಕರಿಗೆ ಸಂಚರಿಸಲು ಹಾಗೂ ವಾಕಿಂಗ್ ಮಾಡಲು ಅನಾನುಕೂಲ ಉಂಟಾಗಿದೆ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಶಿವನಗರ ಬಡಾವಣೆಯ ಹಿರಿಯರು, ವೃದ್ಧರು ಹಾಗೂ ಮಕ್ಕಳು ಆರೋಗ್ಯದ ದೃಷ್ಟಿಯಿಂದ ವಾಕಿಂಗ್ ಮಾಡಲು ಈ ಸ್ಥಳಕ್ಕೆ ಬರುತ್ತಾರೆ. ಆದರೆ ಕಾಮಗಾರಿ ಅರ್ಧದಲ್ಲೇ ನಿಂತಿರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ ಎಂದು ಅವರು ಹೇಳಿದರು.
ಇದಲ್ಲದೆ, ಶಿವನಗರ ವಾಕಿಂಗ್ ಪ್ರದೇಶದ ಸುತ್ತಮುತ್ತ ಅಲ್ಪಾಹಾರ ಅಂಗಡಿಗಳು ನಿಯಂತ್ರಣವಿಲ್ಲದೆ ಹೆಚ್ಚಾಗಿದ್ದು, ಅಂಗಡಿಗಳಿಂದ ಉಂಟಾಗುವ ಕಸವನ್ನು ಅಲ್ಲಿಯೇ ಬಿಸಾಡುವುದರಿಂದ ಪರಿಸರ ಅಸ್ವಚ್ಛವಾಗಿದ್ದು ದುರ್ವಾಸನೆ ಬೀರುತ್ತಿದೆ. ಇದರಿಂದ ವಾಕಿಂಗ್ ಮಾಡಲು ಬರುವ ಜನರಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಹೀಗಾಗಿ ಸಾರ್ವಜನಿಕರ ಹಿತದೃಷ್ಟಿಯಿಂದ ಶಿವನಗರ ವಾಕಿಂಗ್ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಿ ಆಧುನಿಕ ವಾಕಿಂಗ್ ಟ್ರ್ಯಾಕ್ ನಿರ್ಮಿಸಬೇಕು. ಜೊತೆಗೆ ಸಾರ್ವಜನಿಕರು ವಿಶ್ರಾಂತಿ ಪಡೆಯಲು ಆಸನ ವ್ಯವಸ್ಥೆಗಳನ್ನು ಆಧುನಿಕ ಹೈಟೆಕ್ ಮಾದರಿಯಲ್ಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು.ಇದೇ ವೇಳೆ ಶಿವನಗರ ಫುಟ್ಪಾತ್ ಬಳಿ ನಿರ್ಮಿಸಲು ಉದ್ದೇಶಿಸಿರುವ ಫುಡ್ ಕೋರ್ಟ್ ಯೋಜನೆಯನ್ನು ಕೈಬಿಡಬೇಕು ಎಂದು ಸ್ಥಳೀಯರು ಮನವಿ ಪತ್ರದಲ್ಲಿ ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಅವರು, “ಈ ವಿಷಯವು ನನಗೆ ನಾಲ್ಕು ದಿನಗಳ ಹಿಂದೆ ತಿಳಿದುಬಂದಿದೆ. ಇದರ ಬಗ್ಗೆ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಬಂಧಿತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಶಿವನಗರ ಪಾರ್ಕಿಂಗ್ ಸ್ಥಳದಲ್ಲಿ ಯಾವುದೇ ರೀತಿಯ ಫುಡ್ ಕೋರ್ಟ್ ನಿರ್ಮಾಣವನ್ನು ಮಾಡದಂತೆ ತಡೆಹಿಡಿಯಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದಯ್ಯ ಕೋಡಿಮಠ, ಆನಂದ್ ಕುಮಾರ್ ಪಬ್ಬಾ, ಮಲ್ಲಿಕಾರ್ಜುನ್ ಔರಾದೆ, ಬಂಡೆಪ್ಪ ಕೋಟೆ, ಅಶೋಕ್ ಕುಮಾರ್ ಕರಂಜಿ, ವಿಸಾಜಿ ಎಸ್.ಬಿ., ಡಾ. ಪ್ರಭು ಶೆಟ್ಟಿ ಮೂಲ್ಗೆ, ನಿಜಲಿಂಗಪ್ಪ ತಗಾರೆ, ಮನೋಹರ್ ಪಾಟೀಲ್, ನಾಗನಾಥ ಎದುಲ್ಗವೆ, ಶಾಂತವೀರ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







