ಬೀದರ್ :ಜಿಲ್ಲೆಯಲ್ಲಿ ಕೃಷಿ ಇಲಾಖೆಯ ವತಿಯಿಂದ ನಗರದ ನೆಹರೂ ಕ್ರೀಡಾಂಗಣನಲ್ಲಿ 2025–26ನೇ ಸಾಲಿನ ಜಿಲ್ಲಾ ಮಟ್ಟದ ‘ಸಿರಿಧಾನ್ಯ ಮೇಳ, ಮತ್ಸ್ಯ ಮೇಳ, ಉದ್ಯೋಗ ಮೇಳ, ಪುಷ್ಪ ಮೇಳ ಹಾಗೂ ತೋಟಗಾರಿಕೆ ಮೇಳ–2026’ ಭಾನುವಾರ (ಫೆಬ್ರವರಿ 22) ಅದ್ದೂರಿಯಾಗಿ ಆರಂಭಗೊಂಡಿತು. ಎರಡು ದಿನಗಳ ಈ ಮೇಳಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಚಾಲನೆ ನೀಡಿದರು.
ಸಿರಿಧಾನ್ಯಗಳ ಮಹತ್ವ ಒತ್ತಿಹೇಳಿದ ಸಚಿವರು
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಸಿರಿಧಾನ್ಯಗಳು ಕೇವಲ ಆಹಾರವಲ್ಲ, ಆರೋಗ್ಯಪೂರ್ಣ ಜೀವನದ ಭದ್ರ ಆಧಾರವೆಂದು ಹೇಳಿದರು. ರಾಗಿ, ಜೋಳ, ಸಜ್ಜೆ, ನವಣೆ, ಊದಲು ಮುಂತಾದ ಸಿರಿಧಾನ್ಯಗಳಲ್ಲಿ ನಾರು (ಫೈಬರ್), ಕಬ್ಬಿಣ, ಕ್ಯಾಲ್ಸಿಯಂ, ಪ್ರೋಟೀನ್ ಹಾಗೂ ಅಗತ್ಯ ಖನಿಜಾಂಶಗಳು ಸಮೃದ್ಧವಾಗಿವೆ. ಮಧುಮೇಹ, ರಕ್ತದೊತ್ತಡ, ಸ್ಥೂಲತೆ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ನಿಯಂತ್ರಣದಲ್ಲಿ ಇವು ಮಹತ್ವದ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ಮಕ್ಕಳ ಪೋಷಣೆಗೆ, ಗರ್ಭಿಣಿಯರ ಆರೋಗ್ಯಕ್ಕೆ ಹಾಗೂ ವೃದ್ಧರ ಪೌಷ್ಟಿಕ ಅಗತ್ಯಗಳಿಗೆ ಸಿರಿಧಾನ್ಯಗಳು ಅತ್ಯುತ್ತಮ ಆಯ್ಕೆಯಾಗಿವೆ ಎಂದರು.
ದೈನಂದಿನ ಆಹಾರದಲ್ಲಿ ಸಿರಿಧಾನ್ಯ ಬಳಕೆ
ಕಡಿಮೆ ನೀರಿನಲ್ಲಿ ಬೆಳೆಯುವ ಸಿರಿಧಾನ್ಯಗಳು ಹವಾಮಾನ ಬದಲಾವಣೆಯ ಸಂದರ್ಭದಲ್ಲಿಯೂ ರೈತರಿಗೆ ಭದ್ರ ಆದಾಯ ನೀಡುವ ಶಾಶ್ವತ ಬೆಳೆಗಳಾಗಿವೆ. ಆರೋಗ್ಯ ಮತ್ತು ಕೃಷಿ ಎರಡನ್ನೂ ರಕ್ಷಿಸುವ ಶಕ್ತಿ ಸಿರಿಧಾನ್ಯಗಳಲ್ಲಿ ಅಡಗಿದೆ. ಜನರು ತಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಅಳವಡಿಸಿಕೊಳ್ಳಬೇಕು. ರೈತರು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಳಿಗೆಗಳ ವೀಕ್ಷಣೆ, ಸಂವಾದ
ಮೇಳದಲ್ಲಿ ವಿವಿಧ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳ ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಸಚಿವರು ಮಳಿಗೆಗಳಿಗೆ ಭೇಟಿ ನೀಡಿ ರೈತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಮತ್ತು ಯುವಕರೊಂದಿಗೆ ಸಂವಾದ ನಡೆಸಿದರು. ಸಿರಿಧಾನ್ಯ ಆಧಾರಿತ ಆಹಾರ ಉತ್ಪನ್ನಗಳು, ತೋಟಗಾರಿಕೆ ಬೆಳೆಗಳು, ಮತ್ಸ್ಯೋದ್ಯಮ ಹಾಗೂ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದುಕೊಂಡರು.
ರೈತರು, ಯುವಕರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣದ ದಿಕ್ಕಿನಲ್ಲಿ ಇಂತಹ ಮೇಳಗಳು ನಿರಂತರವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಹೆಚ್ಚಿನ ಜನರ ಆಗಮನ
ಮೇಳಕ್ಕೆ ವಿವಿಧ ಭಾಗಗಳಿಂದ ರೈತರು, ತೋಟಗಾರಿಕೆ ಬೆಳೆಗಾರರು, ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಮಡಿಕೆ ಹೂಗಳಿಂದ ವೇದಿಕೆ ಅಲಂಕೃತಗೊಳಿಸಲಾಗಿತ್ತು. ಬೇಸಿಗೆ ಹಿನ್ನಲೆಯಲ್ಲಿ ದ್ರಾಕ್ಷಿ, ಕಲ್ಲಂಗಡಿ ಸೇರಿದಂತೆ ವಿವಿಧ ತಳಿಯ ಹಣ್ಣುಗಳಿಗೆ ಉತ್ತಮ ಬೇಡಿಕೆ ಕಂಡುಬಂದಿತು. ಕೃಷಿ ಉಪಕರಣಗಳ ಖರೀದಿಯಲ್ಲೂ ರೈತರು ತೊಡಗಿದ್ದರು.
ಎರಡು ದಿನಗಳ ಈ ಮೇಳಕ್ಕೆ ಇನ್ನಷ್ಟು ಜನರು ಆಗಮಿಸುವ ನಿರೀಕ್ಷೆಯಿದೆ. ಕೃಷಿ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರಗಳ ಸಮನ್ವಯದ ಈ ಮೇಳ ಜಿಲ್ಲೆಯ ಜನರಲ್ಲಿ ಹೊಸ ಉತ್ಸಾಹ ಮೂಡಿಸಿದೆ.







