ಬೆಂಗಳೂರು :ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ನಿಗಮ-ಮಂಡಳಿಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ನೌಕರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಟೆಂಡರ್ ಅಥವಾ ಒಪ್ಪಂದದ ಅವಧಿ ಮುಗಿದ ತಕ್ಷಣವೇ ಯಾವುದೇ ಮುನ್ಸೂಚನೆ ನೀಡದೆ ಅಂತಹ ಸಿಬ್ಬಂದಿಯನ್ನು ಕೆಲಸದಿಂದ ಬಿಡುಗಡೆಗೊಳಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಸರ್ಕಾರದ ಈ ಆದೇಶದಂತೆ, ಒಪ್ಪಂದದ ಅವಧಿ ಮುಗಿದ ದಿನವೇ ಸಂಬಂಧಿತ ನೌಕರರ ಸೇವೆ ಸ್ವಯಂಚಾಲಿತವಾಗಿ ಕೊನೆಗೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ನಿಯಮ ಉಲ್ಲಂಘಿಸಿದರೆ ಅಧಿಕಾರಿಗಳಿಗೇ ಹೊಣೆ
ಈ ಹೊಸ ಮಾರ್ಗಸೂಚಿಯ ಪ್ರಮುಖ ಅಂಶವೆಂದರೆ, ನಿಯಮ ಮೀರಿ ಹಳೆಯ ಹೊರಗುತ್ತಿಗೆ ಸಿಬ್ಬಂದಿಯನ್ನು ಕೆಲಸದಲ್ಲಿ ಮುಂದುವರಿಸಿದರೆ, ಅವರಿಗೆ ನೀಡುವ ವೇತನವನ್ನು ಸಂಬಂಧಿತ ಇಲಾಖಾ ಮುಖ್ಯಸ್ಥರ ವೈಯಕ್ತಿಕ ಖಾತೆಯಿಂದಲೇ ವಸೂಲಿ ಮಾಡಲಾಗುವುದು. ಆರ್ಥಿಕ ಶಿಸ್ತು ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಯಾರಿಗೆ ಅನ್ವಯ?
ಈ ಸೂಚನೆ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಇಲಾಖೆ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಗಳಿಗೆ ಅನ್ವಯವಾಗುತ್ತದೆ. ಎಲ್ಲ ಇಲಾಖೆಗಳು ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.
ಕಾನೂನಾತ್ಮಕ ಹಕ್ಕಿಲ್ಲ
ಹೈಕೋರ್ಟ್ ನೀಡಿರುವ ತೀರ್ಪುಗಳನ್ನು ಉಲ್ಲೇಖಿಸಿರುವ ಸರ್ಕಾರ, ಹೊರಗುತ್ತಿಗೆ ನೌಕರರು ತಮ್ಮ ಸೇವೆಯನ್ನು ಕಾಯಂಗೊಳಿಸಲು ಅಥವಾ ಮುಂದುವರಿಸಲು ಕಾನೂನಾತ್ಮಕ ಹಕ್ಕು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ.
ಹೊರಗುತ್ತಿಗೆ ನೌಕರರ ಸಂಖ್ಯೆ
ರಾಜ್ಯದಲ್ಲಿ ಒಟ್ಟು 96,844 ಹೊರಗುತ್ತಿಗೆ ನೌಕರರು ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಇಲಾಖೆಗಳ ವಿವರ ಹೀಗಿದೆ:
ಕೃಷಿ ಇಲಾಖೆ: 15,824
ಪಶುಸಂಗೋಪನೆ ಇಲಾಖೆ: 15,376
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ: 11,424
ಸಹಕಾರ ಇಲಾಖೆ: 6,511
ಆರೋಗ್ಯ ಇಲಾಖೆ: 2,286
ಭವಿಷ್ಯದ ನೇಮಕಾತಿ ಹೇಗೆ?
ಇನ್ನು ಮುಂದೆ ಎಲ್ಲಾ ನೇಮಕಾತಿಗಳು ಹೊಸ ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಯಲಿದ್ದು, ಹಳೆಯ ಸಿಬ್ಬಂದಿಗೆ ಆದ್ಯತೆ ನೀಡುವ ಯಾವುದೇ ಬಾಧ್ಯತೆ ಸರ್ಕಾರಕ್ಕಿರುವುದಿಲ್ಲ.
ನೌಕರರಲ್ಲಿ ಆತಂಕ
ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಭವಿಷ್ಯದಲ್ಲಿ ಖಾಯಂ ನೇಮಕವಾಗುವ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಹೊರಗುತ್ತಿಗೆ ನೌಕರರಿಗೆ ಈ ಆದೇಶ ಆತಂಕ ಮೂಡಿಸಿದೆ. ಅವರ ಭವಿಷ್ಯ ಇದೀಗ ಅನಿಶ್ಚಿತತೆಯಲ್ಲಿದೆ







